ರಾಗಿಣಿ ಬಿಜೆಪಿ ಸದಸ್ಯೆಯಲ್ಲ: ಡಿಸಿಎಂ ಅಶ್ವಥ್ ನಾರಾಯಣ

ಡಿಜಿಟಲ್ ಕನ್ನಡ ಟೀಮ್:

ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿ ಬಂಧನಕ್ಕೆ ಒಳಪಟ್ಟಿರುವ ನಟಿ ರಾಗಿಣಿ ದ್ವಿವೇದಿ ಬಿಜೆಪಿ ಸದಸ್ಯೆ ಅಲ್ಲ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಹೇಳಿದ್ದಾರೆ.

ಲೋಕಸಭೆ ಚುನಾವಣೆಯಿಂದ ವಿಧಾನಸಭೆ ಉಪಚುನಾವಣೆಗಳ ಪ್ರಚಾರದ ವೇಳೆ ನಟಿ ರಾಗಿಣಿಯಿಂದ ಪ್ರಚಾರ ಮಾಡಿಸಿದ್ದ ಬಿಜೆಪಿ ಈಗ ಪಕ್ಷಕ್ಕೆ ಆಗುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿದೆ.

ರಾಗಿಣಿ ಬಿಜೆಪಿ ಸೇರ್ಪಡೆ ಸುದ್ದಿ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಪದೇ ಪದೆ ರಾಗಿಣಿಗೂ ಬಿಜೆಪಿಗೂ ಸಂಬಂಧ ಇಲ್ಲ ಎಂದು ಹೇಳುತ್ತಿದ್ದಾರೆ.

ನಿನ್ನೆಯಷ್ಟೇ ನಟಿಯರಾದ ರಾಗಿಣಿ ಹಾಗೂ ಸಂಜನಾ ಕಾಂಗ್ರೆಸ್ ನಾಯಕರ ಜತೆಗಿನ ಫೋಟೋ ಟ್ವೀಟ್ ಮಾಡಿದ್ದ ಬಿಜೆಪಿ, ಪಕ್ಷಕ್ಕಾಗುತ್ತಿರುವ ನಷ್ಟವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿತ್ತು. ಆದರೆ ನಾಯಕರ ಜತೆಗೆ ಫೋಟೋ ತೆಗೆಸಿಕೊಳ್ಳುವುದು ಬೇರೆ, ಪಕ್ಷದ ಚಿಹ್ನೆ, ಶಾಲು ಹಾಕಿಕೊಂಡು ಚುನಾವಣೆಯಲ್ಲಿ ಪ್ರಚಾರ ಮಾಡುವುದು ಬೇರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಉಪಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿ, ‘ರಾಗಿಣಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ಆದರೆ, ಆಕೆ ನಮ್ಮ ಪಕ್ಷದ ಸದಸ್ಯೆಯಲ್ಲ. ಡ್ರಗ್ಸ್ ಇವತ್ತು ಸ್ಯಾಂಡಲ್ ವುಡ್ ಅಷ್ಟೇ ಅಲ್ಲ, ಎಲ್ಲಾ ಕಡೆಗಳಲ್ಲೂ ಅದರ ಹಾವಳಿಯಿದೆ. ಅದನ್ನು ಸಂಪೂರ್ಣವಾಗಿ ಮಟ್ಟ ಹಾಕಬೇಕಿದೆ. ಆ ನಿಟ್ಟಿನಲ್ಲೇ ಸರ್ಕಾರ ಕೂಡ ಕೆಲಸ ಮಾಡುತ್ತಿದೆ. ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳಲ್ಲಿಯೂ‌ ಡ್ರಗ್ಸ್ ದಂಧೆ ಬಗ್ಗೆ ಸಾಕಷ್ಟು ಆರೋಪಗಳಿವೆ. ನಾವು ಇದನ್ನು ತಡೆಗಟ್ಟಲು ಮುಂದಾಗಿದ್ದೇವೆ. ಎಲ್ಲಾ ಕಡೆಗಳಲ್ಲೂ ಕಡಿವಾಣ ಅನಿವಾರ್ಯ ಎಂದಿದ್ದಾರೆ. ಕಾಲೇಜುಗಳಲ್ಲಿ ಇದನ್ನು ತಡೆಯಲು ಸಾಕಷ್ಟು ಪ್ರಯತ್ನಗಳು ನಡೆದಿವೆ. ಇಲ್ಲವಾದರೆ ಇದೊಂದು ಪಿಡುಗಾಗಿ ಪರಿಣಮಿಸುತ್ತದೆ. ಡ್ರಗ್ಸ್​ ದಂಧೆಯನ್ನು ಸರ್ಕಾರ ಸಂಪೂರ್ಣವಾಗಿ ಮಟ್ಟ ಹಾಕಲಿದೆ’ ಎಂದರು.

Leave a Reply