ಈ ಚುನಾವಣೆ ರಾಜ್ಯದ ಜನರಿಗೆ ಸತ್ವಪರೀಕ್ಷೆ: ಡಿ.ಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

‘ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ರಾಜ್ಯದ ಜನರಿಗೆ ಸತ್ವಪರೀಕ್ಷೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಶಿರಾದಲ್ಲಿ ಪ್ರಚಾರ ನಡೆಸುತ್ತಿರುವ ಡಿ.ಕೆ ಶಿವಕುಮಾರ್ ಅವರು ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಹೇಳಿದ್ದಿಷ್ಟು:

‘ಈ ಚುನಾವಣೆ ರಾಜ್ಯದ ಜನರಿಗೆ ಸತ್ವಪರೀಕ್ಷೆ. ಈ ಸರ್ಕಾರದ ದುರಾಡಳಿತ ವಿರುದ್ಧ ಸಂದೇಶ ರವಾಣಿಸಬೇಕಿದೆ. ಕಾಂಗ್ರೆಸ್ ಪಕ್ಷ ಅಧಿಕಾರ ಇರಲಿ, ಇಲ್ಲದಿರಲಿ ಜನರು ಹಾಗೂ ಸಮಾಜಕ್ಕಾಗಿ ಹೋರಾಟ ಮಾಡಲಿದೆ.

ಶಿರಾ ಕ್ಷೇತ್ರದ ಜನ ನಮಗೆ ಯಾವರೀತಿ ಬೆಂಬಲ ನೀಡುತ್ತಿದ್ದಾರೆ ಎಂಬುದನ್ನು ನಾವು ಹೇಳುವುದಕ್ಕಿಂತ ನೀವೇ ಬಂದು ನೋಡಬೇಕು. ಜನ ಬೆಂಬಲ ಇಲ್ಲ ಅಂತಾ ಬಿಜೆಪಿ ಬೆಳ್ಳಗ್ಗೆಯೇ ದುಡ್ಡು ಹಂಚುತ್ತಿದ್ದಾರೆ. ಅವರು ಹತಾಶರಾಗಿದ್ದಾರೆ. ಹೀಗಾಗಿ ಅವರು ದುಡ್ಡಿನಿಂದ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಚುನಾವಣಾ ಅಧಿಕಾರಿಗಳು, ಪೊಲೀಸರು ಅವರಿಗೆ ಸಹಕಾರ ನೀಡುತ್ತಿದ್ದಾರೆ.

ನಮ್ಮ ನಾಯಕರು ಪ್ರಚಾರ ಮಾಡಿದಷ್ಟು ಬಿಜೆಪಿ ಅಭ್ಯರ್ಥಿ ಸೋಲುತ್ತಾರೆ ಎಂಬ ಆತಂಕದಲ್ಲಿ ಪ್ರಚಾರಕ್ಕೆ ಅಡ್ಡಿಪಡಿಸಲಾಗಿದೆ. ಇದು ಬಿಜೆಪಿಯ ಸಂಸ್ಕೃತಿ ಏನು ಎಂಬುದನ್ನು ತೋರಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಕೇಳುವ ಹಕ್ಕಿದೆ.

ಮಾಜಿ ಮುಖ್ಯಮಂತ್ರಿಗಳಿಗೆ ಅಡ್ಡ ಹಾಕಿ ಪ್ರಚಾರ ಮಾಡಬೇಡ ಎನ್ನುತ್ತಾರೆ. ಪೊಲೀಸ್ ಅಧಿಕಾರಿಗಳು ಹಿಂಬಾಗಿಲಿನಿಂದ ಹೋಗಿ ಎಂದು ತಿಳಿಸುತ್ತಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯಾ? ಈ ಕಾರಣದಿಂದಲೇ ಸರ್ಕಾರವನ್ನು ವಜಾ ಮಾಡಬೇಕು.

ಇದಕ್ಕೆ ಸಹಕಾರ ಕೊಟ್ಟ ಪೊಲೀಸ್ ಅಧಿಕಾಗಳನ್ನು ವಜಾಗಿಳಿಸಬೇಕು. ಪೊಲೀಸ್ ಅಧಿಕಾರಿಗಳು ಹಾಗೂ ಡಿಸಿಪಿ ಏನು ಮಾಡುತ್ತಿದ್ದಾರೆ. ಪೊಲೀಸ್ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳದಿದ್ದರೆ ನಾವು ಅವರ ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳುತ್ತೇವೆ. ಅಡ್ಡಿಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನಾಳೆ ಕ್ಷೇತ್ರದ ಜನ ಅವರ ಸಭೆಗೂ ಅಡ್ಡಿ ಪಡಿಸುತ್ತಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಆಮೇಲೆ ನಮ್ಮ ಕಾರ್ಯಕರ್ತರು ಏನು ಅಂತಾ ತೋರಿಸುತ್ತಾರೆ.

ಬಿಜೆಪಿ ಅವರು ದುಡ್ಡು ಹಂಚುತ್ತಿರುವುದು ಆರೋಪ ಅಲ್ಲ, ನಿಜ. ಮಾಧ್ಯಮಗಳು ಇದನ್ನು ಜನರಿಗೆ ತಿಳಿಸಬೇಕೇ ಹೊರತು ಅದನ್ನು ಮುಚ್ಚಿಹಾಕಬಾರದು. ಪ್ರಜಾಪ್ರಭುತ್ವ ಉಳಿಸಲು ಮಾಧ್ಯಮಗಳೇ ಚುನಾವಣಾ ಆಯೋಗಕ್ಕೆ ದೂರು ನೀಡಬೇಕು.

ಜನ ಸರ್ಕಾರದ ವಿರುದ್ಧ ಮತ ಹಾಕಲಿದ್ದಾರೆ. ಸರ್ಕಾರ ಉಳಿಯುತ್ತದೋ ಇಲ್ಲವೋ ಎಂಬುದನ್ನು ಬಿಜೆಪಿ ಶಾಸಕರು, ಮಾಜಿ ಮಂತ್ರಿ, ನಾಯಕರೇ ಹೇಳುತ್ತಿದ್ದಾರೆ. ನಾವು ಇದನ್ನು ಗಮಣಿಸುತ್ತಿದ್ದೇನೆ.

ಆಶಾವಾದಿ ರಾಜಕಾರಣ ಇರಬೇಕು. ಹೀಗಾಗಿ ಕುಮಾರಸ್ವಾಮಿ ಅವರಿಗೆ ಶುಭಕೋರುತ್ತೇನೆ. ನಮಗೆ ಎರಡೂ ಪಕ್ಷಗಳು ನೇರ ಎದುರಾಳಿಗಳೇ, ಒಬ್ಬರು ಶಕ್ತಿಶಾಲಿ, ಮತ್ತೊಬ್ಬರು ದುರ್ಬಲ ಎಂದು ಹೇಳುವುದಿಲ್ಲ. ಎರಡೂ ಪಕ್ಷದ ಅಭ್ಯರ್ಥಿಗಳು ಸೋತು, ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ.’

Leave a Reply