ಬಿಜೆಪಿಯವರು ನಮ್ಮ ಅಭ್ಯರ್ಥಿಯನ್ನು ಮುದಿ ಎತ್ತು ಎಂದು ಕರೆಯಲಿ, ನಾವು ಮಾತ್ರ ಮುಖ್ಯಮಂತ್ರಿಗಳನ್ನು ಆ ರೀತಿ ಕರೆಯುವುದಿಲ್ಲ: ಡಿ.ಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ನಾಯಕರು ನಮ್ಮ ಅಭ್ಯರ್ಥಿಯನ್ನು ಮುದಿ ಎತ್ತು ಎಂದು ಕರೆಯಲಿ, ನಾವು ಮಾತ್ರ ಮುಖ್ಯಮಂತ್ರಿಗಳನ್ನು ಆ ರೀತಿ ಕರೆಯುವುದಿಲ್ಲ. ಮುಖ್ಯಮಂತ್ರಗಳನ್ನು ಅವರ ವಯಸ್ಸನ್ನು ನಾವು ಗೌರವಿಸುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ಟೀಕೆಗೆ ಸಂಬಂಧಿಸಿದಂತೆ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್ ಹೇಳಿದ್ದಿಷ್ಟು:

ಜಯಚಂದ್ರ ಅವರನ್ನು ಬಿಜೆಪಿಯವರು ಮುದಿ ಎತ್ತು ಎಂದು ಕರೆದರೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳನ್ನು ನಾವು ಏನಂತಾ ಕರೆಯಬೇಕು? ಯಡಿಯೂರಪ್ಪನವರ ವಯಸ್ಸಿನ ಬಗ್ಗೆ ನಾವು ಮಾತನಾಡುವುದಿಲ್ಲ. ನಮ್ಮ ತಂದೆಗೆ ವಯಸ್ಸಾದಂತೆ ಅವರಿಗೂ ವಯ್ಯಸ್ಸಾಗಿದೆ. ಜಯಚಂದ್ರ ಅವರಿಗೆ 71 ವರ್ಷ, ಮೊನ್ನೆ ಬಿಜೆಪಿ ಮಂತ್ರಿಗಳನ್ನು ಇದೇ ಜಯಚಂದ್ರ ಅವರ ಬಳಿ ತರಬೇತಿ ತೆಗೆದುಕೊಂಡು ಬನ್ನಿ ಅಂತಾ ಹೇಳಿ ಕಳುಹಿಸಿದ್ದರು. ಜಯಚಂದ್ರ ಅವರು ಕಂದಾಯ ಸಚಿವರಿಗೆ 2 ಗಂಟೆ ಪಾಠ ಮಾಡಿ ಕಳುಹಿಸಿದ್ದಾರೆ. ಜಯಚಂದ್ರ ಅವರಿಗೆ ಅಷ್ಟು ಅನುಭವವಿದೆ. ಜಯಚಂದ್ರ ಅವರನ್ನು ಮುದಿ ಎತ್ತು, ತಮ್ಮ ಅಭ್ಯರ್ಥಿ ದುಡಿಯುವ ಎತ್ತು ಎಂದು ಹೇಳುತ್ತಾರೆ. ಅವರ ಅಭ್ಯರ್ಥಿ ಏನು ದುಡಿಮೆ ಮಾಡಿದ್ದಾರೆ. ಬಿಜೆಪಿಯವರು ಬೇಕಾದರೆ ನಮ್ಮ ಅಭ್ಯರ್ಥಿಯನ್ನು ಮುದಿ ಎತ್ತು ಎಂದು ಕರೆದುಕೊಳ್ಳಲಿ ಆದರೆ ನಾವು ಮಾತ್ರ ಮುಖ್ಯಮಂತ್ರಿಗಳನ್ನು ಆ ರೀತಿ ಕರೆಯುವುದಿಲ್ಲ.

*ಪ್ರಚಾರಕ್ಕೆ ಅಡ್ಡಿಪಡಿಸಿದವರ ವಿರುದ್ದ ಕ್ರಮ ಕೈಗೊಳ್ಳಲಿ:*

ನಾವು ಇರೋ ವಿಚಾರ ಹೇಳಿದರೆ ಬಿಜೆಪಿ ಕಾರ್ಯಕರ್ತರು ಅಡ್ಡ ಹಾಕಿ, ಹೋಗಬೇಡ ಅಂತಿದ್ದಾರೆ. ಇದು ಯಾವ ದೇಶ? ಇದಕ್ಕೆಲ್ಲ ನಾವು ಬಗ್ಗುವುದಿಲ್ಲ. ನಿನ್ನೆ ಪ್ರಚಾರಕ್ಕೆ ಅಡ್ಡಿ ಪಡಿಸಿದವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಿಲ್ಲ ಎಂದರೆ, ಯಾವುದೇ ಬಿಜೆಪಿ ನಾಯಕರ ಭಾಷಣಗಳನ್ನು ಮಾಡಲು ನಮ್ಮ ಕಾರ್ಯಕರ್ತರು ಬಿಡುವುದಿಲ್ಲ ಎಂದು ನಮ್ಮ ನಾಯಕರು ತೀರ್ಮಾನಿಸಿದ್ದಾರೆ. ಇದನ್ನು ಚುನಾವಣಾ ಆಯೋಗ ಹಾಗೂ ಪೊಲೀಸ್ ಆಯುಕ್ತರು ಗಮನದಲ್ಲಿಟ್ಟುಕೊಳ್ಳಬೇಕು.
ಎಸಿಪಿಯೊಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಹಿಂದಿನ ಗೇಟ್ ನಿಂದ ಹೋಗಲು ಹೇಳುತ್ತಾನೆ ಎಂದರೆ ಎಂತಹ ರಾಜಕಾರಣ ನಡೆಯುತ್ತಿದೆ. ಅವರಿಗೆ ರಕ್ಷಣೆ ಕೊಡದ ಆ ಪೊಲೀಸ್ ಅಧಿಕಾರಿಯನ್ನು ವಜಾಗೊಳಿಸಬೇಕು.

*ನನ್ನ ವಿರುದ್ಧ ಟೀಕಿಸಲು ಸಚಿವರಿಗೆ ಟಾಸ್ಕ್:*

ಬಿಜೆಪಿ ನಾಯಕರು ನಿಯಂತ್ರಣ ಕಳೆದುಕೊಳ್ಳುತ್ತಿದ್ದಾರೆ. ಅವರು ಕಾಂಗ್ರೆಸ್ ಬಗ್ಗೆಯೂ ಮಾತನಾಡಲು ಆಗುತ್ತಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಬಗ್ಗೆಯೂ ಮಾತನಾಡಲಾಗುತ್ತಿಲ್ಲ. ಹೀಗಾಗಿ ಮುಖ್ಯಮಂತ್ರಿಗಳು ಒಕ್ಕಲಿಗ ಸಚಿವರುಗಳಿಗೆ ಟಾಸ್ಕ್ ಕೊಟ್ಟು ಡಿ.ಕೆ ಶಿವಕುಮಾರ್ ವಿರುದ್ಧ ಮಾತನಾಡಲು ಹೇಳಿದ್ದಾರೆ. ಹೀಗಾಗಿ ಬಿಜೆಪಿ ಸಚಿವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.

Leave a Reply