ಮಹಿಳೆಯರಿಗೆ ಅವಕಾಶ ಸಿಗೋದೆ ಕಡಿಮೆ, ಆದರೆ ಕಾಂಗ್ರೆಸ್ ನನಗೆ ಆ ಅವಕಾಶ ನೀಡಿದೆ: ಕುಸುಮಾ

ಡಿಜಿಟಲ್ ಕನ್ನಡ ಟೀಮ್:

ಮಹಿಳೆಯರು ತಮಗಿಂತ ತಮ್ಮ ಮನೆಯವರ ಬಗ್ಗೆ ಯೋಚಿಸುವುದೇ ಹೆಚ್ಚು. ಆದರೆ ಮಹಿಳೆಯರಿಗೆ ಅವಕಾಶ ಸಿಗುವುದು ಕಡಿಮೆ. ಆ ಅವಕಾಶವನ್ನು ಕಾಂಗ್ರೆಸ್ ನನಗೆ ನೀಡಿದೆ ಎಂದು ಕುಸುಮಾ ತಿಳಿಸಿದ್ದಾರೆ.

ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜತೆ ರೋಡ್ ಶೋ ನಡೆಸಿದ ಅಭ್ಯರ್ಥಿ ಕುಸುಮಾ ಹೇಳಿದ್ದಿಷ್ಟು:

‘ಇಂದು ನಾನು ಮತ್ತೆ ನಿಮ್ಮ ಮನೆ ಮುಂದೆ ಬಂದು ನಿಂತಿದ್ದೇನೆ. ಈ ಬಾರಿ ನಮ್ಮ ಪಕ್ಷದ ಪ್ರಮುಖ ನಾಯಕರ ಜತೆ ಬಂದಿದ್ದೇನೆ.

ಮಹಿಳೆಯರು ತಮಗಿಂತ ತಮ್ಮ ಮನೆಯಲ್ಲಿರುವ ಗಂಡ, ಮಕ್ಕಳು, ತಂದೆ, ತಾಯಿ, ಸೋದರ, ಸೋದರಿ ಬಗ್ಗೆ ಯೋಚಿಸುವುದೇ ಹೆಚ್ಚು. ಅವರಿಗೆ ಅಷ್ಟು ದೊಡ್ಡ ಮನಸ್ಸಿರುತ್ತದೆ. ಆದರೆ ಮಹಿಳೆಯರಿಗೆ ರಾಜಕೀಯದಲ್ಲಿ ಅವಕಾಶ ಸಿಗುವುದೇ ಕಡಿಮೆ. ಆ ಅವಕಾಶವನ್ನು ಕಾಂಗ್ರೆಸ್ ನನಗೆ ನೀಡಿದೆ. ನಿಮ್ಮ ಸೇವೆಗಾಗಿ ಅದನ್ನು ಮುಡಿಪಾಗಿಡುತ್ತೇನೆ.

ಈ ಚುನಾವಣೆಯಲ್ಲಿ ನನ್ನ ಹೆಸರು ಕೇಳಿಬರುತ್ತಿದ್ದಂತೆ ನನ್ನ ಮೇಲೆ ಗದಾಪ್ರಹಾರ ನಡೆಯುತ್ತಿದೆ. ನಾನು ನನ್ನ ಗಂಡನ ಹೆಸರು ಬಳಸಬಾರದು ಅಂತಾರೆ. ನನ್ನ ಮೇಲೆ ಎಫ್ಐಆರ್ ಹಾಕ್ತಾರೆ. ಪ್ರಚಾರಕ್ಕೆ ಹೋದಲ್ಲೆಲ್ಲಾ ತೊಂದರೆ ಕೊಡುತ್ತಿದ್ದಾರೆ.

ನಾನು ಅವರಿಗೆ ಒಂದು ಪ್ರಶ್ನೆ ಕೇಳಲು ಇಚ್ಚಿಸುತ್ತೇನೆ. ಹೆಣ್ಣು ಮಗಳಾಗಿ ನಾನು ರಾಜಕೀಯಕ್ಕೆ ಬರೋದು ತಪ್ಪಾ? ಜನರ ಸೇವೆ ಮಾಡೋದು ತಪ್ಪಾ? ಇಲ್ಲಿರುವ ಯುವಕರು, ಮಹಿಳೆಯರು ಒಟ್ಟಾಗಿ ನಿಲ್ಲಬೇಕು. ಒಂದು ಹೆಣ್ಣಿಗೆ ಅವಕಾಶ ಸಿಕ್ಕಾಗ ಆಕೆಯೂ ದೇಶ ಕಟ್ಟುವ ಕೆಲಸವನ್ನು ಸಮರ್ಥವಾಗಿ ಮಾಡುತ್ತಾಳೆ ಎಂಬುದನ್ನು ತೋರಿಸಲು ಅವಕಾಶ ಮಾಡಿಕೊಡಿ.

ನಿಮ್ಮ ಮನೆ ಮಗಳಾದ ನನಗೆ ನವೆಂಬರ್ 3 ರಂದು ನಡೆಯಲಿರುವ ಚುನಾವಣೆಯಲ್ಲಿ ಕ್ರಮ ಸಂಖ್ಯೆ 1 ಹಸ್ತದ ಗುರುತಿಗೆ ಮತಹಾಕಿ ಆಶೀರ್ವದಿಸಿ.’

Leave a Reply