ಸರಕಾರ ಎಲ್ಲರಿಗೂ ಒಳ್ಳೆಯದು ಮಾಡಲಿ, ಸಮಾಜ ಒಡೆವ ಕೆಲಸ ಮಾಡೋದು ಬೇಡ: ಡಿ.ಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

‘ಸರ್ಕಾರ ರಾಜ್ಯದ ಎಲ್ಲ ಜನರಿಗೂ ಒಳ್ಳೆಯ ಕೆಲಸ ಮಾಡಲಿ. ಆದರೆ ಜಾತಿ, ಸಮುದಾಯದ ಹೆಸರಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡಬಾರದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದ ಅವರು ಹೇಳಿದ್ದಿಷ್ಟು:

‘ಎಲ್ಲ ಸಮುದಾಯದ ಜನರನ್ನು ನಾವು ಗೌರವಯುತವಾಗಿ ನೋಡಬೇಕು ಎಂದು ಸಂವಿಧಾನದಲ್ಲಿ ತಿಳಿಸಿದೆ. ಇಷ್ಟು ದಿನ ನಾವು ಎಲ್ಲರನ್ನೂ ಸಮಾನವಾಗಿ ನೋಡುತ್ತಿರಲಿಲ್ಲವೇ? ರಾಜ್ಯ ಸರ್ಕಾರಕ್ಕೆ ಇಷ್ಟು ದಿನ ಮರಾಠರ ಬಗ್ಗೆ ಕಾಳಜಿ ಇರಲಿಲ್ಲವೇ? ಮರಾಠರು ಸೇರಿದಂತೆ ರಾಜ್ಯದಲ್ಲಿರುವ ಎಲ್ಲ ಸಮುದಾಯದವರ ಏಳಿಗೆಗೆ ಹಾಗೂ ಜನರಿಗೆ ಒಳ್ಳೆಯದು ಮಾಡಿದರೆ ನಾವು ಬೆಂಬಲ ನೀಡುತ್ತೇವೆ. ಆದರೆ ಅದರ ಹಿಂದೆ ಸಮಾಜವನ್ನು ವಿಭಜಿಸುವ ಉದ್ದೇಶ ಇರುವುದು ಸರಿಯಲ್ಲ.

ಬಿಜೆಪಿ ಮೊದಲಿನಿಂದಲೂ ಸಮಾಜ ಒಡೆಯುವ ಕೆಲಸವನ್ನೇ ಮಾಡಿಕೊಂಡು ಬರುತ್ತಿದೆ. ಮರಾಠಿಗರನ್ನು ಪ್ರತ್ಯೇಕವಾಗಿ ನೋಡುವ ಅಗತ್ಯ ಏನಿದೆ? ಈ ಬಗ್ಗೆ ನಾವು ಚರ್ಚೆ ಮಾಡುತ್ತಿದ್ದು, ಸದ್ಯ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.

*ಕೇಂದ್ರದಿಂದ ರಾಜ್ಯದ ನಿರ್ಲಕ್ಷ್ಯ:*

ರಾಜ್ಯ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದರೂ ಈ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸುತ್ತಿಲ್ಲ. ಚುನಾವಣೆ ಎದುರಾದ ಬಿಹಾರ, ಪಶ್ಚಿಮ ಬಂಗಾಳ ರಾಜ್ಯಗಳು ಕೇಂದ್ರ ಸರ್ಕಾರದ ಆದ್ಯತೆಯೇ ಹೊರತು ಕರ್ನಾಟಕ ರಾಜ್ಯವಲ್ಲ.

ರಾಜ್ಯದ ಜನರ ಪರವಾಗಿ ಕೇಂದ್ರ ಸರ್ಕಾರದ ಬಳಿ ಮಾತನಾಡಲು ಬಿಜೆಪಿ ನಾಯಕರಿಗೆ ಧ್ವನಿ ಇಲ್ಲವಾಗಿದೆ. ನಮ್ಮ ಸರ್ಕಾರ ಇದ್ದಾಗಲೂ ಅವರನ್ನು ಕರೆದುಕೊಂಡು ಹೋದಾಗ ಬಾಯಿ ಬಿಡುತ್ತಿರಲಿಲ್ಲ. ಕೇಂದ್ರದಿಂದ ನೆರವು ಪಡೆಯುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ.

ನಿಮಗೆ ಕೇಳಲು ಆಗದಿದ್ದರೆ ನಮ್ಮನ್ನು ಕರೆದುಕೊಂಡು ಹೋಗಿ. ನಾವು ಕೇಳುತ್ತೇವೆ ಎಂದು ನಮ್ಮ ವಿರೋಧ ಪಕ್ಷದ ನಾಯಕರು ಕೇಳುತ್ತಿದ್ದಾರೆ. ಅದನ್ನೂ ಮಾಡುತ್ತಿಲ್ಲ.

*ರಾಜ್ಯ ಸಭೆ ಚುನಾವಣೆ ಕುರಿತು ಶೀಘ್ರ ತೀರ್ಮಾನ:*

ರಾಜ್ಯ ಸಭೆಯ ಒಂದು ಸದಸ್ಯ ಸ್ಥಾನಕ್ಕೆ ನಡೆಯಲಿರುವ ಉಪ ಚುನಾವಣೆ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳುತ್ತೇವೆ. ಇದು ಬಿಜೆಪಿ ಅವರ ಚುನಾವಣೆ. ಇಲ್ಲಿ ಬಹಿರಂಗ ಮತದಾನ ನಡೆಯುತ್ತದೆ. ನಮ್ಮ ಬಳಿ ಎಷ್ಟು ಸಂಖ್ಯೆ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಅಭ್ಯರ್ಥಿ ನಿಲ್ಲಿಸಬೇಕೆ, ಬೇಡವೇ ಎಂಬುದರ ಬಗ್ಗೆ ಚರ್ಚೆ ಮಾಡುತ್ತೇವೆ.

*ಬೇರೆ ಪಕ್ಷಗಳ ನಿರ್ಧಾರ ನಾವು ಪ್ರಶ್ನಿಸುವುದಿಲ್ಲ:*

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತದೆಯೋ ಇಲ್ಲವೋ ಎಂಬುದು ಅವರಿಗೆ ಬಿಟ್ಟದ್ದು. ಬೇರೆ ಪಕ್ಷದಿಂದ ಅಧಿಕೃತ ತೀರ್ಮಾನ ಬರುವವರೆಗೂ ನಾನು ಮಾತನಾಡುವುದು ಸೂಕ್ತ ಅಲ್ಲ. ಅವರ ರಾಜಕೀಯ ಲಾಭ, ತಂತ್ರಗಾರಿಕೆ ಅವರಿಗೆ ಬಿಟ್ಟ ವಿಚಾರ. ಅದನ್ನು ನಾವು ಪ್ರಶ್ನೆ ಮಾಡುವುದಿಲ್ಲ.

ಯಾವ ಜಿಲ್ಲೆಯಲ್ಲಿ ಯಾವ ಸ್ಥಿತಿ ಇದೆ ಎಂದು ನಾವು ಹತ್ತಿರದಿಂದ ನೋಡುತ್ತಿದ್ದೇವೆ. ಅವರು ಯಾವ ಅಭ್ಯರ್ಥಿ ನಿಲ್ಲಿಸುತ್ತಾರೆ, ಯಾರಿಗೆ ಬೆಂಬಲ ನೀಡುತ್ತಾರೆ ಎಂಬುದನ್ನೂ ನೋಡಿ ನಾವು ಮಾತನಾಡುತ್ತೇವೆ. ಈ ಬಗ್ಗೆ ಸದ್ಯಕ್ಕೆ ಪ್ರತಿಕ್ರಿಯೆ ನೀಡುವುದು ಆತುರವಾಗಲಿದೆ.’

*ಸಾರಿಗೆ ನೌಕರರಿಗೆ ವೇತನ ನೀಡಬೇಕು:*

ಸರ್ಕಾರ ಸಾರಿಗೆ ನೌಕರರಿಗೆ ಮೂರು ತಿಂಗಳಿನಿಂದ ಸಿಬ್ಬಂದಿಗೆ ವೇತನ ನೀಡದೆ ಬಾಕಿ ಉಳಿಸಿಕೊಂಡಿರುವುದು ಸರಿಯಲ್ಲ. ವೇತನ ನೀಡದಿದ್ದರೆ ಅವರ ಜೀವನ ಸಾಗಿಸುವುದಾದರೂ ಹೇಗೆ? ಯಾವುದಾದರೂ ಒಂದು ಯೋಜನೆ ನಿಲ್ಲಿಸಿ ಅವರಿಗೆ ವೇತನ ಕೊಡಲಿ.

ಇತ್ತ ಶಿಕ್ಷಣ ಇಲಾಖೆಯಲ್ಲಿ ಯಾವಾಗ ಶಾಲೆ ತೆರೆಯಬೇಕು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಶುಲ್ಕ ಪಡೆಯುವಂತಿಲ್ಲ ಎಂದಿದ್ದಾರೆ. ಶಿಕ್ಷಕರಿಗೆ ವೇತನ ಇಲ್ಲವಾಗಿದೆ. ಮಕ್ಕಳ ಭವಿಷ್ಯದ ಬಗ್ಗೆ ಪೋಷಕರು ಚಿಂತಿತರಾಗಿದ್ದಾರೆ. ನಗರ ಪ್ರದೇಶಗಳಲ್ಲಿ ಅನುಕೂಲ ಇರುವವರಿಗೆ ಆನ್ ಲೈನ್ ತರಗತಿ ನಡೆಸಲಾಗುತ್ತಿದೆ. ಉಳಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪಾಠವೇ ಇಲ್ಲವಾಗಿದೆ.

ಇನ್ನು ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಲಾಕ್ ಡೌನ್ ಹಾಗೂ ಅಲ್ಲಿನ ಸಿಬ್ಬಂದಿ ಪ್ರತಿಭಟನೆ ವಿಚಾರವಾಗಿ ಆಂತರಿಕವಾಗಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದ್ದು, ಅದಾದ ನಂತರ ಮಾತನಾಡುತ್ತೇನೆ ಎಂದರು.

ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರ ಸ್ವದೇಶಿ ಉತ್ಪನ್ನಗಳ ಬಳಕೆ ಹೆಚ್ಚಾಗಿದ್ದು, ಆರ್ಥಿಕತೆ ಸುಧಾರಿಸುತ್ತಿದೆ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಅವರು ಹೇಳಿರುವ ವಿಚಾರ ಸಂತೋಷ ತಂದಿದೆ. ದೇಶಕ್ಕೆ ಇಂತಹ ಆರ್ಥಿಕ ತಜ್ಞರ ಅವಶ್ಯಕತೆ ಇದೆ’ ಎಂದು ಮಾರ್ಮಿಕವಾಗಿ ಚುಚ್ಚಿದರು.

Leave a Reply