ಕಾನೂನನ್ನು ಎಲ್ಲರೂ ಗೌರವಿಸಬೇಕು; ನಾನು ಆರಂಭದಿಂದಲೂ ಅಖಂಡ ಪರವಾಗಿದ್ದೇನೆ: ಡಿ.ಕೆ. ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

ಸಂಪತ್ ರಾಜ್ ಆಗಲಿ ಅಥವಾ ಬೇರೆ ಯಾರೇ ಆಗಲಿ ಎಲ್ಲರೂ ಕಾನೂನನ್ನು ಗೌರವಿಸಬೇಕು. ಸರಕಾರ ಕಾನೂನು ದುರುಪಯೋಗ ಮಾಡಿಕೊಳ್ಳುತ್ತಿರುವುದನ್ನೂ ನಾವು ನೋಡುತ್ತಿದ್ದೇವೆ. ನಾನು ಆರಂಭದಿಂದಲೂ ಶಾಸಕ ಅಖಂಡ ಅವರ ಪರವಾಗಿದ್ದೇನೆ. ಬೇರೆಯವರ ವೈಯಕ್ತಿಕ ಅಭಿಪ್ರಾಯ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಕೆ.ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ಬಂಧನ ಕುರಿತು ಸದಾಶಿವನಗರ ನಿವಾಸದ ಬಳಿ ಮಂಗಳವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಿಷ್ಟು:

‘ಅಖಂಡ ಶ್ರೀನಿವಾಸ ಮೂರ್ತಿ ಅವರು ಈವರೆಗೂ ನನ್ನ ಬಳಿ ಬಂದು ಮಾತನಾಡಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದು, ಅದರದೇ ಆದ ಪ್ರಕ್ರಿಯೆ ನಡೆಯುತ್ತಿದೆ. ಕೇವಲ ಒಬ್ಬರ ಅಭಿಪ್ರಾಯದ ಮೇಲೆ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ.

ನಾನು ನ್ಯಾಯಬದ್ಧವಾಗಿ, ಕಾನೂನಿನ ಚೌಕಟ್ಟಿನಲ್ಲಿ ನಡೆದುಕೊಳ್ಳುವ ಎಲ್ಲರ ಪರವಾಗಿದ್ದೇನೆ. ನಾನು ಅಖಂಡ ಅವರ ಪರವಾಗಿಲ್ಲ ಎಂದು ಯಾರು ಹೇಳಿದರು? ಈ ಪ್ರಕರಣ ನಡೆದ ಕ್ಷಣದಿಂದಲೂ ಅವರ ಜತೆ ಇದ್ದೇವೆ. ನಾನು ನಮ್ಮ ನಾಯಕರು ಅವರ ಮನೆಗೆ ಹೋಗಿದ್ದೇವೆ. ಅವರ ಜತೆ ಚರ್ಚೆ ಮಾಡಿದ್ದೇವೆ. ಪೊಲೀಸರ ವೈಫಲ್ಯ ತೋರಿಸಿದ್ದೇವೆ. ಪೊಲೀಸರು ಬಿಜೆಪಿಯ ಒತ್ತಡಕ್ಕೆ ಮಣಿಯಬಾರದು ಅಂತಲೂ ಹೇಳಿದ್ದೇವೆ.

ಅಖಂಡ ಅವರು ನಿಮ್ಮ ಬಳಿ (ಮಾಧ್ಯಮಗಳ) ಮಾತನಾಡುವುದಕ್ಕಿಂತ ನನ್ನ ಬಳಿ ಬಂದು ಮಾತನಾಡಲಿ. ಯಾರದೇ ವೈಯಕ್ತಿಕ ಅಭಿಪ್ರಾಯ ಕುರಿತು ನಾನು ಪ್ರತಿಕ್ರಿಯೆ ನೀಡುವುದಿಲ್ಲ.

ಇದು ಬಿಜೆಪಿಯವರ ಕುತಂತ್ರ. ಕಾಂಗ್ರೆಸ್ ಗೆ ಕೆಟ್ಟ ಹೆಸರು ತರಲು ಈ ಪ್ರಯತ್ನ ಮಾಡುತ್ತಿದೆ. ಸಂಪತ್ ರಾಜ್ ಅವರನ್ನು ಟಾರ್ಗೆಟ್ ಮಾಡುತ್ತಿರುವುದು ನಿಜ. ಇದರಲ್ಲಿ ಮುಚ್ಚಿಡುವುದೇನಿಲ್ಲ. ಅವರ ವಿರುದ್ಧದ ಆರೋಪ ಪಟ್ಟಿ ನೋಡಿದ್ದೇನೆ. ಕಾಂಗ್ರೆಸ್ ಅನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಕಾಂಗ್ರೆಸ್ ನಾಯಕರಿಗೆ ತೊಂದರೆ ನೀಡಬೇಕು ಅಂತಾ ಈ ರೀತಿ ಮಾಡುತ್ತಿದ್ದಾರೆ. ಈ ವಿಚಾರ ನ್ಯಾಯಾಲಯದಲ್ಲಿ ಇರುವ ಕಾರಣ ಹೆಚ್ಚಾಗಿ ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ.

ಸಂಪತ್ ರಾಜ್ ಎಲ್ಲಿಯೂ ಓಡಿ ಹೋಗಿರಲಿಲ್ಲ. ಅವರಿಗೆ ಆರೋಗ್ಯ ಸಮಸ್ಯೆ ಇತ್ತು. ಈಗ ಅವರು ಸಿಕ್ಕಿದ್ದಾರಲ್ಲ.

*ಭತ್ತಕ್ಕೆ ಕನಿಷ್ಠ 500 ರೂ ಹೆಚ್ಚುವರಿ ಬೆಂಬಲ ಬೆಲೆ ಕೊಡಲಿ:*

ಭತ್ತದ ಬೆಲೆ ಕುಸಿತದ ಬಗ್ಗೆ ನಾವು ಚರ್ಚೆ ನಡೆಸುತ್ತಿದ್ದೇವೆ. 900 ರೂಪಾಯಿಗೆ ಕುಸಿದಿದ್ದರೂ ಸರ್ಕಾರ ಆ ಬಗ್ಗೆ ಗಮನ ಹರಿಸುತ್ತಿಲ್ಲ. ಹೀಗಾಗಿ ರೈತರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುತ್ತೇವೆ. ಭತ್ತ ಖರೀದಿಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಈ ಸಮಯದಲ್ಲಿ ಸರ್ಕಾರ ಭತ್ತಕ್ಕೆ ಹೆಚ್ಚುವರಿಯಾಗಿ ಕನಿಷ್ಠ 500 ರೂಪಾಯಿ ಬೆಂಬಲ ಬೆಲೆ ಘೋಷಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡುತ್ತೇವೆ.

*ಪೋಷಕರು, ವಿದ್ಯಾರ್ಥಿಗಳ ರಕ್ಷಣೆ ಸರ್ಕಾರದ ಜವಾಬ್ದಾರಿ:*

ಸರ್ಕಾರ ಸಾಕಷ್ಟು ವಿಮರ್ಶೆ ಮಾಡಿ ಕಾಲೇಜು ಆರಂಭದ ತೀರ್ಮಾನ ಕೈಗೊಂಡಿದೆ. ಸರ್ಕಾರಕ್ಕೆ ನಮ್ಮ ಸಲಹೆ ನೀಡಿದ್ದೇವೆ. ಅವರು ಏನು ಮಾಡುತ್ತಾರೋ ಮಾಡಲಿ. ಶಾಲೆ ಇರಲಿ ಅಥವಾ ಕಾಲೇಜ್ ಇರಲಿ ಪೋಷಕರಿಗೆ ನೆಮ್ಮದಿ, ಮಾರ್ಗದರ್ಶನ ನೀಡಬೇಕಿರುವುದು ಸರ್ಕಾರದ ಕರ್ತವ್ಯ.

ಮರಾಠ ಪ್ರಾಧಿಕಾರ ವಿಚಾರವಾಗಿ ಪಕ್ಷದಲ್ಲಿ ಚರ್ಚೆ ನಡೆಸಬೇಕಿದೆ. ಇನ್ನು ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾಗುವುದಿದೆ. ಬಸವಕಲ್ಯಾಣ, ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯೂ ಬರುತ್ತಿದ್ದು, ನಾವು ಪ್ರಮುಖವಾಗಿ ರೈತರ ಸಮಸ್ಯೆ ಪರಿಹಾರ ಹಾಗೂ ಅವರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುತ್ತೇವೆ.

Leave a Reply