ಸರ್ಕಾರದ ನಿರ್ಲಕ್ಷ್ಯದಿಂದ ರಾಜ್ಯ ಬೊಕ್ಕಸಕ್ಕೆ 15 ಸಾವಿರ ಕೋಟಿ ರೂ. ನಷ್ಟ: ಈಶ್ವರ್ ಖಂಡ್ರೆ

ಡಿಜಿಟಲ್ ಕನ್ನಡ ಟೀಮ್:

ಕೊರೋನಾ, ಪ್ರವಾಹ, ಆರ್ಥಿಕ ಕುಸಿತ, ತೆರಿಗೆ ಸಂಗ್ರಹ ಕುಸಿತ ಹೀಗೆ ಹಲವು ಕಾರಣಗಳಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಈ ಮಧ್ಯೆ ಸರ್ಕಾರದ ನಿರ್ಲಕ್ಷ್ಯದಿಂದ ರಾಜ್ಯ ಬೊಕ್ಕಸಕ್ಕೆ 15 ಸಾವಿರ ಕೋಟಿ ನಷ್ಟವಾಗಿದೆ.

ಹೌದು, ರಾಜ್ಯ ಇಂಧನ ಇಲಾಖೆ ಉನ್ನತಾಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ರಾಜ್ಯದ ಬೊಕ್ಕಸಕ್ಕೆ ಈಗಾಗಲೇ 15 ಸಾವಿರ ಕೋಟಿ ರೂ. ನಷ್ಟವಾಗಿದ್ದು, ಸರ್ಕಾರ ಈ ನಷ್ಟದ ಹೊರೆಯನ್ನು ವಿದ್ಯುತ್ ದರ ಹೆಚ್ಚಿಸಿ ಗ್ರಾಹಕರ ಮೇಲೆ ಹಾಕಲಾಗಿದೆ.

ಈ ವಿಚಾರದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ಅವರು ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಅವರು ಹೇಳಿದ್ದಿಷ್ಟು:

ರಾಜ್ಯದಲ್ಲಿ ಸೌರ ವಿದ್ಯುತ್ ಪಾರ್ಕ್ ಮತ್ತು ಘಟಕಗಳ ಸ್ಥಾಪನೆ, ಇತರ ಮೂಲಗಳ ಹೆಚ್ಚುವರಿ ಸಾಮರ್ಥ್ಯದಿಂದಾಗಿ ಪ್ರಸ್ತುತ ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚು ವಿದ್ಯುತ್ ಲಭ್ಯವಿದ್ದು, ಕೇಂದ್ರದಿಂದ ಮತ್ತು ಇತರ ರಾಜ್ಯಗಳಿಂದ ಹೆಚ್ಚುವರಿ ವಿದ್ಯುತ್ ಖರೀದಿ ಮಾಡುವ ಅಗತ್ಯ ಇಲ್ಲ. ಜೊತೆಗೆ ಈಗಾಗಲೇ ಮಾಡಿಕೊಂಡಿರುವ ದೀರ್ಘಾವಧಿ ವಿದ್ಯುತ್ ಖರೀದಿಗೆ ಒಪ್ಪಂದ ರದ್ದು ಪಡಿಸುವ ಅವಕಾಶವಿದ್ದರೂ ಇಂಧನ ಇಲಾಖೆ ಕಣ್ಣು ಮುಚ್ಚಿ ಕುಳಿತಿರುವ ಕಾರಣ ಕಳೆದ ಒಂದೂವರೆ ವರ್ಷದಿಂದ ರಾಜ್ಯದ ಭೊಕ್ಕಸಕ್ಕೆ 15 ಸಾವಿರ ಕೋಟಿ ರೂಪಾಯಿ ನಷ್ಟ ಉಂಟಾಗಿದ್ದು, ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ 4 ವರ್ಷದಲ್ಲಿ 44 ಸಾವಿರ ಕೋಟಿ ರೂ. ನಷ್ಟದ ಹೊರೆಯನ್ನು ರಾಜ್ಯದ ಜನತೆ ಹೊರಬೇಕಾಗುತ್ತದೆ.

ಮನೆ ದೇವರನ್ನು ಮೂಟೆ ಕಟ್ಟಿ ನೆರೆದೇವರಿಗೆ ಕೊಂಡ ಹಾಯ್ದರು ಎನ್ನುವ ಗಾದೆಯಂತೆ ನಮ್ಮ ರಾಜ್ಯದ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಉತ್ಪಾದನೆ ತಗ್ಗಿಸಿ ಅಥವಾ ನಿಲ್ಲಿಸಿ, ಬೇಜವಾಬ್ದಾರಿತನ ಪ್ರದರ್ಶಿಸುತ್ತಿರುವ ಸರ್ಕಾರ, ಕೇಂದ್ರದಿಂದ ಮತ್ತು ಅನ್ಯ ರಾಜ್ಯದಿಂದ ವಿದ್ಯುತ್ ಖರೀದಿಸುತ್ತಿರುವುದರ ಹಿಂದಿನ ಉದ್ದೇಶ ಏನು?

ಇಂಧನ ಇಲಾಖೆ ಸೂಕ್ತ ಲೆಕ್ಕಾಚಾರ ಇಲ್ಲದೆ ವಿದ್ಯುತ್ ಖರೀದಿಸುತ್ತಿರುವುದರಿಂದ ಮತ್ತು ಸೂಕ್ತ ಕಾಲದಲ್ಲಿ ಒಪ್ಪಂದ ರದ್ದು ಮಾಡದೆ ಇರುವುದರಿಂದಾಗಿ, 15 ಸಾವಿರ ಕೋಟಿ ರೂಪಾಯಿ ನಷ್ಟ ಉಂಟಾಗಿರುವ ಕುರಿತಂತೆ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರೇ ಸರ್ಕಾರಕ್ಕೆ, 14.10.2020ರಂದು ಮತ್ತು 15.10.2020ರಂದು 40 ಪುಟಗಳ ಸವಿರವಾದ ಪತ್ರ ಬರೆದಿದ್ದಾರೆ.

ಕೇಂದ್ರೀಯ ಉತ್ಪಾದನಾ ಕೇಂದ್ರಗಳಿಂದ (ಸಿಜಿಎಸ್) ರಾಜ್ಯದ ಎಲ್ಲ ಎಸ್ಕಾಂಗಳು 5514 ಮೆಗಾ ವ್ಯಾಟ್ ವಿದ್ಯುತ್ ದೀರ್ಘಾವಧಿಗೆ ಪಡೆದುಕೊಂಡಿವೆ. ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಪಿಜಿಸಿಐಎಲ್) ನಿಂದ ಕೂಡ ಅಷ್ಟೇ ಬೃಹತ್ ಪ್ರಮಾಣದ ದೀರ್ಘಾವಧಿಯ ಮುಕ್ತ ಪ್ರವೇಶವನ್ನು ಪಡೆದುಕೊಳ್ಳಲಾಗಿದೆ. 2019-20ರ ಅವಧಿಯಲ್ಲಿ, ಎಸ್ಕಾಮ್ ಗಳು ಸಿಜಿಎಸ್‌ ಗೆ ಸ್ಥಿರ ಶುಲ್ಕವಾಗಿ 4,388 ಕೋಟಿ ರೂ. ಮತ್ತು ಪ್ರಸರಣ ಶುಲ್ಕವಾಗಿ ಪಿಜಿಸಿಐಎಲ್‌ ಗೆ 3,037 ಕೋಟಿ ರೂ. ಪಾವತಿಸಿವೆ. ಈ ಮೊತ್ತ 7,425 ಕೋಟಿ ರೂ. ಆಗುತ್ತದೆ.
ಪ್ರಸ್ತುತ, ರಾಜ್ಯದಲ್ಲಿ 55,387 ದಶಲಕ್ಷ ಯುನಿಟ್ ಹೆಚ್ಚುವರಿ ಬಳಕೆಯಾಗದ ಸಾಮರ್ಥ್ಯವನ್ನು ಹೊಂದಿದೆ ಆದಾಗ್ಯೂ, (ಎನ್‌.ಸಿಇ ಮತ್ತು ಕೆಪಿಸಿಎಲ್ ಸೇರಿದಂತೆ) ಇದಕ್ಕಾಗಿ 11,069 ಕೋಟಿ ರೂ. ಪಾವತಿಸಿದೆ. ಈ 9,284 ಕೋಟಿ ರೂ.ಗಳನ್ನು ಸಾಮರ್ಥ್ಯದ ಬಳಕೆ ಮಾಡಿಕೊಳ್ಳದಿರುವುದಕ್ಕಾಗಿ ವೆಚ್ಚ ಮಾಡಲಾಗಿದೆ, ಉಳಿದ 1,785 ಕೋಟಿ ರೂ.ಗಳನ್ನು ಪಿಜಿಸಿಐಎಲ್ ನೊಂದಿಗೆ ಸಂಪರ್ಕಿತವಾದ ವಿದ್ಯುತ್ ಪ್ರಸರಣ ಕಾರಿಡಾರ್ ಬಳಕೆ ಮಾಡಿಕೊಳ್ಳದಿರುವುದಕ್ಕೆ ವೆಚ್ಚ ಮಾಡಲಾಗಿದೆ. ಇದನ್ನು ಸರಕಾರ ರದ್ದು ಮಾಡಬೇಕು. ಇಲ್ಲದಿದ್ದರೆ ರಾಜ್ಯ ತಾನು ಪಡೆಯದ ವಿದ್ಯುತ್ ಗೆ ಹಣ ಪಾವತಿ ಮಾಡುವುದರಿಂದ ಅದರ ಹೊರೆ ಬೆಲೆ ಏರಿಕೆಯ ರೂಪದಲ್ಲಿ ರಾಜ್ಯದ ಜನತೆಗೆ ಆಗುತ್ತಿರುತ್ತದೆ.

ಪ್ರಸ್ತುತ ರಾಜ್ಯದಲ್ಲಿರುವ ಹೆಚ್ಚುವರಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಮುಂದಿನ 4-5 ವರ್ಷಗಳಲ್ಲಿ ಬೇಡಿಕೆ ಹೆಚ್ಚಿದಾಗ ಬಳಸಿಕೊಳ್ಳಬಹುದಾಗಿದೆ. ಅಲ್ಲಿಯವರೆಗೆ ಹೆಚ್ಚುವರಿ ವಿದ್ಯುತ್ ಸಾಮರ್ಥ್ಯದ ನಿರ್ವಹಣೆ ಮಾಡದಿದ್ದರೆ ಮುಂದಿನ 4-5 ವರ್ಷಗಳವರೆಗೆ ಅಂದರೆ ಬೇಡಿಕೆ ಮತ್ತು ಹೆಚ್ಚುವರಿ ವಿದ್ಯುತ್ ಪ್ರಮಾಣ ಸರಿದೂಗುವತನಕ ರಾಜ್ಯ ಸರ್ಕಾರ ಮತ್ತು ಎಸ್ಕಾಂಗಳು ನಿಷ್ಪ್ರಯೋಜಕವಾಗಿ ವರ್ಷಕ್ಕೆ 11 ಸಾವಿರ ಮತ್ತು ನಾಲ್ಕು ವರ್ಷಕ್ಕೆ 44 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ ಎಂದು ಪಿಆರ್.ಡಿ.ಸಿ.ಎಲ್. ವರದಿ ತಿಳಿಸಿದೆ. ಈ ಬಗ್ಗೆ ಸರ್ಕಾರಕ್ಕೆ 2019ರ ಆಗಸ್ಟ್ ನಲ್ಲೇ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಕಳೆದ ವರ್ಷ ರಾಜ್ಯದ ಬೊಕ್ಕಸಕ್ಕೆ 5 ಸಾವಿರ ಕೋಟಿ ರೂಪಾಯಿ ನಷ್ಟ ಉಂಟು ಮಾಡಿದೆ. ಈ ವರ್ಷ ಅಂದರೆ 2020-21ರ ಅವಧಿಯಲ್ಲಿ ಈಗಾಗಲೇ 8 ತಿಂಗಳು ಕಳೆದಿದ್ದು, 11 ಸಾವಿರ ಕೋಟಿ ರೂಪಾಯಿ ನಷ್ಟ ಸಂಭವಿಸಲಿದೆ, ಅಂದರೆ ಒಟ್ಟಾರೆ ರಾಜ್ಯಕ್ಕೆ ಕಳೆದ 15 ತಿಂಗಳಲ್ಲಿ ಆಗಿರುವ ನಷ್ಟ 15 ಸಾವಿರ ಕೋಟಿ ರೂಪಾಯಿ.

ಮಿಗಿಲಾಗಿ ಸರ್ಕಾರ 10 ಸಾವಿರ ಮೆಗಾ ವ್ಯಾಟ್ ಸೌರ ವಿದ್ಯುತ್ ಯೋಜನೆಯನ್ನು ಕುಸುಮ್ ಯೋಜನೆ ಅಡಿಯಲ್ಲಿ ಅನುಷ್ಠಾನ ಮಾಡಿದರೆ, ಒಟ್ಟು ಬಳಸಿಕೊಳ್ಳದ ವಿದ್ಯುತ್ ಸಾಮರ್ಥ್ಯ 81,667 ಮಿಲಿಯನ್ ಯುನಿಟ್ ಗೆ ಹೆಚ್ಚಳವಾಗುತ್ತದೆ. ಇದರ ವೆಚ್ಚ ಆಗ ಪ್ರತಿ ವರ್ಷ 17,900 ಕೋಟಿ ರೂಪಾಯಿಗೆ ಹೆಚ್ಚಳವಾಗುತ್ತದೆ. ಆಗ ರಾಜ್ಯ ವಾರ್ಷಿಕ 18 ಸಾವಿರ ರೂಪಾಯಿ ನಷ್ಟ ಅನುಭವಿಸಬೇಕಾಗುತ್ತದೆ.

ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಪಡೆಯಲು, ಪವನ ವಿದ್ಯುತ್, ಸೌರವಿದ್ಯುತ್ ಉತ್ಪಾದನೆಗೆ ಒತ್ತು ನೀಡಲಾಗಿದೆ. ಇದರ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಹೀಗಾಗಿ ಅನ್ಯ ರಾಜ್ಯದಿಂದ ವಿದ್ಯುತ್ ಖರೀದಿಸುವ ಅಗತ್ಯವೇ ಇರುವುದಿಲ್ಲ. ಆದರೂ ದೀರ್ಘಾವಧಿ ಒಪ್ಪಂದ ರದ್ದು ಮಾಡದೆ, ಖರೀದಿಸಿದ ವಿದ್ಯುತ್ ಬಳಕೆಯನ್ನೂ ಮಾಡಿಕೊಳ್ಳದೆ ಟ್ರಾನ್ಸ್ ಮಿಷನ್ ಗಾಗಿ ಫಿಕ್ಸೆಡ್ ಚಾರ್ಜಸ್ – ಸ್ಥಿರ ಶುಲ್ಕ ಪಾವತಿಸುತ್ತಿರುವುದು ಅವಿವೇಕದ ಪರಮಾವಧಿ.

ಪ್ರಮುಖವಾದ ಇಂಧನ, ಹಣಕಾಸು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಡಿಪಿಎಆರ್, ಸಣ್ಣ ಕೈಗಾರಿಕೆ ಎಲ್ಲವನ್ನೂ ಮುಖ್ಯಮಂತ್ರಿ ಒಬ್ಬರೇ ನಿರ್ವಹಿಸುವುದು ಕಷ್ಟಸಾಧ್ಯ. ಹೀಗಾಗಿ ರಾಜ್ಯ ತೀವ್ರ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಮುಖ್ಯಮಂತ್ರಿಗಳ ಕಚೇರಿಯ ಅಧಿಕಾರಿಗಳು, ಮುಖ್ಯಕಾರ್ಯದರ್ಶಿ, ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ ತಮ್ಮ ನಿರ್ಲಕ್ಷ್ಯದಿಂದ ರಾಜ್ಯಕ್ಕೆ ಸಾವಿರಾರು ಕೋಟಿ ನಷ್ಟ ಉಂಟು ಮಾಡಿದ್ದಾರೆ. ವ್ಯವಸ್ಥಾಪಕ ನಿರ್ದೇಶಕರು ಪತ್ರ ಬರೆದು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲವೇಕೆ?

ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಬಳಕೆಯಾಗದ ಸಾಮರ್ಥ್ಯವನ್ನು ವಾಪಸ್ ನೀಡುವ ಕಾರ್ಯ ಮಾಡಬೇಕು. ಕೂಡಲೇ ಈ ಕೆಲಸ ಮಾಡಿದರೂ, ಈ ವರ್ಷದ ಉಳಿದ ಅವಧಿಗೆ ರಾಜ್ಯಕ್ಕೆ ಅದರಲ್ಲೂ ಇಂಧನ ಇಲಾಖೆಗೆ ಕನಿಷ್ಠ ವಾರ್ಷಿಕ 10,000 ಕೋಟಿ ರೂಪಾಯಿ ಉಳಿತಾಯ ಆಗುತ್ತದೆ. ಇದರಿಂದ ರಾಜ್ಯದ ಜನತೆಯ ಮೇಲೆ ಬೀಳುತ್ತಿರುವ ವಿದ್ಯುತ್ ದರ ಏರಿಕೆ ಹೊರೆ ಇಳಿಸಬಹುದು.

ಕೆಲವು ಒಪ್ಪಂದಗಳಾಗಿ ದಶಕಗಳೇ ಕಳೆದಿದೆ. ಅವುಗಳನ್ನು ರದ್ದು ಮಾಡಲು ಸರ್ಕಾರಕ್ಕೆ ಸಂಪೂರ್ಣ ಅವಕಾಶವಿದೆ. ಉದಾಹರಣೆಗೆ ಎನ್.ಟಿ.ಪಿ.ಸಿ, ರಾಮಗುಂಡಮ್ 1, 2 ಮತ್ತು 3ನೇ ಘಟಕ, ತಾಲ್ಚೇರ್ ಎಸ್.ಟಿ.ಪಿ.ಎಸ್. 2ನೇ ಹಂತ, ಎನ್.ಎಲ್.ಸಿ. ಟಿಪಿಎಸ್ 1ನೇ ಹಂತದ ಒಪ್ಪಂದ ರದ್ದು ಮಾಡಲು ಯಾವುದೇ ಅಡ್ಡಿ ಇಲ್ಲ. ಈಗ ರಾಜ್ಯದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಾಗಿದ್ದು, ಬೇಡಿಕೆ ಇಲ್ಲದಿದ್ದರೂ ಆದನ್ನು ರದ್ದು ಮಾಡದಿರುವುದರ ಹಿಂದೆ ಯಾರ ಪಿತೂರಿ ಇದೆ. ಇದರಿಂದ ಯಾರಿಗೆ ಲಾಭವಿದೆ ಎಂಬುದನ್ನು ಸರ್ಕಾರ ಮತ್ತು ಇಂಧನ ಖಾತೆ ಹೊಣೆ ಹೊತ್ತ ಮುಖ್ಯಮಂತ್ರಿಗಳೇ ಹೇಳಬೇಕು.’

Leave a Reply