ಕೋವಿಡ್ ಲಸಿಕೆ ವಿತರಣೆ; ಪೂರ್ವತಯಾರಿ ಆರಂಭ

ಡಿಜಿಟಲ್ ಕನ್ನಡ ಟೀಮ್:

ಕೋವಿಡ್ ಲಸಿಕೆ ಇನ್ನಷ್ಟೇ ಅಧಿಕೃತವಾಗಿ ಬಿಡುಗಡೆಯಾಗಬೇಕಿದ್ದು, ದೇಶ ಹಾಗೂ ರಾಜ್ಯದಲ್ಲಿ ಇದರ ವಿತರಣೆಗೆ ಪೂರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳ ಜತೆ ಮಂಗಳವಾರ ಸಭೆ ನಡೆಸಿದ್ದಾರೆ. ಜತೆಗೆ ಚುನಾವಣೆಯ ಬೂತ್ ಮಾದರಿಯಲ್ಲಿ ಲಸಿಕೆ ವಿತರಣೆ ಕೇಂದ್ರಗಳನ್ನು ತಯಾರಿ ಮಾಡಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ.

ಈ ವಿಚಾರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ನೀಡಿದ್ದು, ಮೊದಲು ದೇಶದಲ್ಲಿ 30 ಕೋಟಿ ಜನರಿಗೆ ಲಸಿಕೆ ವಿತರಣೆ ಮಾಡಲಾಗುವುದು. ಅದರಲ್ಲಿ 1 ಕೋಟಿ ಆರೋಗ್ಯ ಕಾರ್ಯಕರ್ತರು, 2 ಕೋಟಿ ಕೊರೋನಾ ವಾರಿಯರ್ಸ್ ಹಾಗೂ 27 ಕೋಟಿಯಷ್ಟು ಜನ 50 ವರ್ಷ ದಾಟಿದವರಿಗೆ ನೀಡಲಾಗುವುದು ಎಂದರು.

ಸದ್ಯ ಜಗತ್ತಿನಾದ್ಯಂತ 50 ಲಸಿಕೆ ಕ್ಲಿನಿಕಲ್ ರೀಸರ್ಚ್ ಹಂತದಲ್ಲಿದ್ದು, 25 ಲಸಿಕೆ ಪ್ರಾಯೋಗಿಕ ಹಂತದಲ್ಲಿವೆ. ಭಾರತದಲ್ಲಿ 25 ಕಂಪನಿಗಳು ಲಸಿಕೆ ಕಂಡು ಹಿಡಿಯುವ ಪ್ರಯತ್ನದಲ್ಲಿದ್ದು, 5 ಲಸಿಕೆ ಪ್ರಾಯೋಗಿಕ ಹಂತದಲ್ಲಿವೆ ಎಂದು ಮಾಹಿತಿ ಕೊಟ್ಟರು.

ಇನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಕೊಟ್ಟಿರುವ ಮಾಹಿತಿಯಲ್ಲಿ, ರಾಜ್ಯದಲ್ಲಿ ಕೊವಿಡ್ ಲಸಿಕೆ ವಿತರಣೆಗೆ 29,451 ಕೇಂದ್ರಗಳನ್ನು ಗುರುತಿಸಲಾಗಿದೆ. 10,008 ಲಸಿಕೆ ವಿತರಣಾ ಸಿಬ್ಬಂದಿ ಗುರುತಿಸಲಾಗಿದೆ. ಸರ್ಕಾರಿ ಆರೋಗ್ಯ ಕೇಂದ್ರಗಳ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರ ಮಾಹಿತಿ ಸಂಗ್ರಹವಾಗಿದೆ. ಶೇ.80ರಷ್ಟು ಖಾಸಗಿ ಆಸ್ಪತ್ರೆಗಳು ಈಗಾಗಲೇ ಮಾಹಿತಿ ನೀಡಿದ್ದು, ಮುಂದಿನ ವಾರದೊಳಗೆ ಉಳಿದ ಶೇ.20ರಷ್ಟು ಆಸ್ಪತ್ರೆಗಳು ಮಾಹಿತಿ ನೀಡಲಿವೆ, ರಾಜ್ಯದಲ್ಲಿ ಲಸಿಕೆ ಸಂಗ್ರಹ ಹಾಗೂ ವಿತರಣೆಗೆ 2,855 ಕೋಲ್ಡ್ ಚೇನ್ ಕೇಂದ್ರ ಲಭ್ಯವಿದೆ ಎಂದು ತಿಳಿಸಿದ್ದಾರೆ.

Leave a Reply