ಖಾತೆ ಹಂಚಿಕೆ ಬೆನ್ನಲ್ಲೇ ಭುಗಿಲೆದ್ದ ಖ್ಯಾತೆ !

ಡಿಜಿಟಲ್ ಕನ್ನಡ ವಿಶೇಷ:

ನಿರೀಕ್ಷೆಯಂತೆ ಬಿಜೆಪಿಯಲ್ಲಿ ಮತ್ತೊಮ್ಮೆ ಅಸಮಾಧಾನ ಭುಗಿಲೆದ್ದಿದೆ. ಸಂಪುಟಕ್ಕೆ ಹೊಸದಾಗಿ ಸೇರ್ಪಡೆಗೊಂಡ ಸಪ್ತ ಸಚಿವರಿಗೆ ಖಾತೆ ಹಂಚಿಕೆ ಮಾಡುತ್ತಿದ್ದಂತೆ ಹೊಸ ಹಾಗೂ ಹಳೆ ಸಚಿವರು ಕಣ್ಣು ಕೆಂಪಗಾಗಿಸಿಕೊಂಡಿದ್ದು, ಸಿಎಂ ಯಡಿಯೂರಪ್ಪ ಅವರತ್ತ ವ್ಯಗ್ರ ದೃಷ್ಟಿ ಬೀರಿದ್ದಾರೆ.

ಈ ಪ್ರಹಸನದಲ್ಲಿ ತೀವ್ರ ನಷ್ಟಕ್ಕೆ ಒಳಗಾದವರು ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದು ಆಪರೇಷನ್ ಕಮಲಕ್ಕೆ ಬಲಿಯಾಗಿ ಬಿಜೆಪಿ ಸೇರಿ ಸಚಿವರಾದ ಮಹಾಶಯರು. ಆಯಕಟ್ಟಿನ ಖಾತೆಯ ನಿರೀಕ್ಷೆಯಲ್ಲಿದ್ದ ಇವರಿಗೆ ಈಗ ತೀವ್ರ ನಿರಾಸೆಯಾಗಿದೆ. ಅದರಲ್ಲೂ ಯಡಿಯೂರಪ್ಪ ಸಂಪುಟದಲ್ಲಿ ಆರೋಗ್ಯ ಹಾಗೂ ವೈದ್ಯ ಶಿಕ್ಷಣದಂಥ ಪ್ರಬಲ ಖಾತೆ ಪಡೆದು ಮೂಲ ಬಿಜೆಪಿಯವರೇ ಕರಬುವಂಥೆ ಬೀಗುತ್ತಿದ್ದ ಡಾ.ಕೆ.ಸುಧಾಕರ್ ಅವರಿಗೆ ಈ ಖಾತೆ ಪುನರ್ ಹಂಚಿಕೆ ಸಂದರ್ಭದಲ್ಲಿ ಬಾಲ ಕತ್ತರಿಸಲಾಗಿದೆ. ಕೆ.ಗೋಪಾಲಯ್ಯ ಅವರನ್ನು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಯಿಂದ ಎತ್ತಂಗಡಿ ಮಾಡಲಾಗಿದೆ.

ಬೆಂಗಳೂರು ಅಭಿವೃದ್ಧಿ ಅಥವಾ ವಸತಿ ಖಾತೆ ನಿರೀಕ್ಷೆಯಲ್ಲಿದ್ದ ಎಂಟಿಬಿ ನಾಗರಾಜ್ ಅವರಿಗೆ ಅಬಕಾರಿ ಹೊಣೆ ನೀಡಲಾಗಿದೆ. ನಾರಾಯಣ ಗೌಡ ಬಳಿ ಇದ್ದ ಮೂರು ಖಾತೆ ಕಿತ್ತುಕ್ಕೊಂಡು ಯುವಜನ ಸೇವೆಗೆ ನೂಕಲಾಗಿದೆ. ಇದರಿಂದ ಕ್ರೋಧಗೊಂಡಿರುವ ವಲಸಿಗ ಸಚಿವರು ಡಾ.ಸುಧಾಕರ್ ನಿವಾಸದಲ್ಲಿ ಸಭೆ ಸೇರಿ ತಂತ್ರಗಾರಿಕೆ ನಡೆಸಿದ್ದು ಅಸಮಾಧಾನ ಹೊರಹಾಕಿದ್ದಾರೆ. ಆದರೆ ಸಿಎಂ ಯಡಿಯೂರಪ್ಪ ಇದ್ಯಾವುದಕ್ಕೂ ಸೊಪ್ಪು ಹಾಕುತ್ತಿಲ್ಲ. ಹೀಗಾಗಿ ವಲಸಿಗ ಸಚಿವರ ಆಕ್ರೋಶಕ್ಕೆ ಬೆಲೆ ಸಿಗುತ್ತಿಲ್ಲ. ನರಿಯ ಕೂಗು ದೊರೆಗೆ ಮುಟ್ಟೀತೆ ? ಎಂಬ ಸ್ಥಿತಿ ಇವರದ್ದಾಗಿದೆ.

ಇನ್ನು ಪ್ರಬಲ ಖಾತೆಯ ನಿರೀಕ್ಷೆಯಲ್ಲಿದ್ದ ಅರವಿಂದ ಲಿಂಬಾವಳಿ, ಮುರುಗೇಶ್ ನಿರಾಣಿ, ಉಮೇಶ್ ಕತ್ತಿಯವರಿಗೆ ಆಯಕಟ್ಟಿನ ಖಾತೆ ನೀಡಿಲ್ಲ. ಹೀಗಾಗಿ ಖಾತೆ ಮರು ಹಂಚಿಕೆ ವಿಚಾರ ಬಿಜೆಪಿಯಲ್ಲಿ ಅಸಮಾಧಾನದ ಪರ್ವತ ಸೃಷ್ಟಿಸಿದ್ದು ಮತ್ತೆ ಹೈಕಮಾಂಡ್ ಅಂಗಣಕ್ಕೆ ಇದು ತಲುಪುವ ಸಾಧ್ಯತೆ ಇದೆ.

ಅಧಿಕಾರಕ್ಕೆ ಬಂದ ಆರಂಭದಿಂದಲೂ ಒಂದಿಲ್ಲೊಂದು ವಿಚಾರಗಳಿಂದ ವಿವಾದದ ಕೇಂದ್ರ ಬಿಂದುವಾಗಿರುವ ಬಿಜೆಪಿ ಸರಕಾರದಲ್ಲಿ ಈಗ ಆಂತರಿಕ ವಿಚಾರಗಳು ಬೀದಿ ಜಗಳದ ಹಂತ ತಲುಪಿದೆ. ಮುಂಬರು ದಿನಗಳಲ್ಲಿ ಇದು ಇನ್ನಷ್ಟು ಹದೆಗೆಡುವ ಸಾಧ್ಯತೆ ಇದ್ದು ಯಡಿಯೂರಪ್ಪ ಖುರ್ಚಿ ನಡುಗಿಸುತ್ತಿದೆ

Leave a Reply