ಹಂ.ಪ ನಾಗರಾಜಯ್ಯ ಅವರ ವಿಚಾರಣೆ ನಡೆಸಿರುವುದು ರಾಜ್ಯಕ್ಕೆ ಮಾಡಿದ ಅಪಮಾನ: ಡಿ.ಕೆ. ಶಿವಕುಮಾರ್ ಆಕ್ರೋಶ

ಡಿಜಿಟಲ್ ಕನ್ನಡ ಟೀಮ್:

‘ಬಿಜೆಪಿ ಸರ್ಕಾರ ತನ್ನ ವಿರುದ್ಧ ಧ್ವನಿ ಎತ್ತಿದವರನ್ನು ಜೈಲಿಗೆ ಕಳುಹಿಸಿ ಬೆದರಿಸುವ ಪ್ರಯತ್ನ ಮಾಡುತ್ತಿದೆ. ಮಂಡ್ಯದಲ್ಲಿ ಹಂ.ಪ ನಾಗರಾಜಯ್ಯ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಮಾಡಿರುವುದು ಕನ್ನಡ ಸಾಹಿತ್ಯ ಲೋಕ ಹಾಗೂ ರಾಜ್ಯಕ್ಕೆ ಮಾಡಿದ ಅಪಮಾನ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ತಮ್ಮ ಸದಾಶಿವನಗರ ನಿವಾಸದಲ್ಲಿ ಮಾಧ್ಯಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಹೇಳಿದ್ದಿಷ್ಟು;

‘ಮಂಡ್ಯದಲ್ಲಿ ಹಿರಿಯ ಸಾಹಿತಿ ಭಾಷಾ ಸಂಶೋಧಕ ಹಂ.ಪ ನಾಗರಾಜಯ್ಯ ಅವರನ್ನು ಬಂಧಿಸಿದ್ದಾರೆ. ಅವರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಸಾಹಿತಿ ಲೋಕಕ್ಕೆ ಹೆಸರು ತಂದವರು. ಅವರು ಕೇಂದ್ರ ಸರ್ಕಾರ ಧರ್ಮರಾಯನಂತೆ ಬಂದು ದುರ್ಯೋಧನಂತೆ ವರ್ತಿಸುತ್ತಿದೆ ಎಂದು ಹೇಳಿದ್ದಕ್ಕೆ ಅವರನ್ನು ಪೊಲೀಸ್ ಠಾಣೆಗೆ ಕಳುಹಿಸಿ ವಿಚಾರಣೆ ನಡೆಸುವುದರೆ ಏನಿದು? ಕನ್ನಡ ಸಾಹಿತ್ಯ ಪರಿಷತ್ ಏನು ಮಾಡುತ್ತಿದೆ? ಕನ್ನಡ ರಕ್ಷಣೆ ಹೆಸರಲ್ಲಿರುವ ಕರವೇ, ಜಯ ಕರ್ನಾಟಕ ಹಾಗೂ ಇತರೆ ಕನ್ನಡ ಪರ ಸಂಘಟನೆಗಳು ಏನು ಮಾಡುತ್ತಿವೆ? ಇವರು ಇರುವುದು ಯಾತಕ್ಕೆ?

ಅವರು ದೇಶದ ರೈತರ ವಿಚಾರದಲ್ಲಿ ಅವರ ಧ್ವನಿ ಎತ್ತಿದ್ದಾರೆ. ಅವರಿಗೆ ಮಾತನಾಡುವ ಹಕ್ಕಿಲ್ಲವೇ? ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿರುವುದು ಸರಿಯಲ್ಲ. ಇದು ಕರ್ನಾಟಕ ಸಾಹಿತ್ಯ ಲೋಕಕ್ಕೆ ಆಗಿರುವ ಅಪಮಾನ. ಕೂಡಲೇ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದದಕ್ಕೆ ಕಾರಣರಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.

ಈ ಸರ್ಕಾರದ ಬಗ್ಗೆ ಮಾತನಾಡುವವರನ್ನೆಲ್ಲ ಜೈಲಿಗೆ ಕಳುಹಿಸಲು, ಬೇರೆ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡುವುದು ಎಷ್ಟು ಸರಿ? ಇದೆಲ್ಲ ಎಷ್ಟು ದಿನ ನಡೆಯುತ್ತದೆ? ಇದು ರಾಜ್ಯದ ಸ್ವಾಭಿಮಾನದ ಪ್ರಶ್ನೆ.

ನಾನು ಅವರ ಮನೆಗೆ ಹೋಗಿ ಅವರ ಮನೆಯವರನ್ನು ಸಂಪರ್ಕಿಸಿ ಮಾತನಾಡುತ್ತೇನೆ. ನಾನು ಚಿಕ್ಕ ವಯಸ್ಸಿನಿಂದ ಆ ಕುಟುಂಬ ನೋಡಿಕೊಂಡು ಬಂದಿದ್ದೇನೆ. ಅವರು ಯಾರ ಜತೆಗೂ ಗುರುತಿಸಿಕೊಂಡಿಲ್ಲ.

*ಸ್ಫೋಟಕ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ನಿರ್ಮಿಸಲಿ:*

ಸ್ಫೋಟಕಗಳನ್ನು ಹೇಗೆ ಎಲ್ಲಿ ಸಂಗ್ರಹಿಸಬೇಕು, ಎಲ್ಲಿ ಸಂಗ್ರಹಿಸಬೇಕು, ಅದನ್ನು ಯಾವ ರೀತಿ ಸಾಗಿಸಬೇಕು, ಹೇಗೆ ಬಳಸಬೇಕು ಎಂದು ನಿರ್ದಿಷ್ಟ ಮಾರ್ಗದರ್ಶನ ಇದೆ.

ಇಷ್ಟು ದೊಡ್ಡ ಪ್ರಮಾಣದ ಸ್ಫೋಟಕ ಹೇಗೆ ಸಾಗುಸುತ್ತಿದ್ದರು ಎಂಬುದು ಪ್ರಮುಖ ವಿಚಾರ. ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಿರುವುದನ್ನು ನಾವು ನೋಡಿದ್ದೇವೆ. ಮುಂಜಾಗೃತವಾಗಿ ಜವಾಬ್ದಾರಿಯುತ ವ್ಯವಸ್ಥೆ ನಿರ್ಮಿಸಬೇಕು. ಈ ದುರ್ಘಟನೆಯಲ್ಲಿ ಅನೇಕರು ಮೃತಪಟ್ಟಿರುವುದು ಆಘಾತಕಾರಿ ಬೆಳವಣಿಗೆ. ಎರಡು ಜಿಲ್ಲೆಗಳ ಜನರಿಗೆ ಗಾಬರಿ ಉಂಟು ಮಾಡಿದ್ದಕ್ಕೆ ಯಾರು ಹೊಣೆ? ಇದರ ಜವಾಬ್ದಾರಿ ಯಾರು ಹೊತ್ತುಕೊಳ್ಳುತ್ತಾರೆ? ಎಂಬುದನ್ನು ನಾವು ಯೋಚಿಸಬೇಕು.

ಕೇವಲ ತನಿಖೆಗೆ ಆದೇಶಿಸುವುದಲ್ಲಿ ಸ್ವತಃ ಮುಖ್ಯಮಂತ್ರಿಗಳು ನೂತನ ಗಣಿ ಸಚಿವರು ಅಲ್ಲಿ ಹೋಗಿ ಪರಿಸ್ಥಿತಿ ಅವಲೋಕಿಸಬೇಕು. ಚರ್ಚೆ ಮಾಡಬೇಕು.

*ವಲಸಿಗರ ರಾಜಕೀಯ ಸಮಾಧಿ ಕಟ್ಟುತ್ತಾರೆ ಎಂದು ಹೇಳಿದ್ದೆ*

ವಲಸೆ ಹೋದವರ ವಿಚಾರವಾಗಿ ನಾನು ವಿಧಾನ ಸಭೆಯಲ್ಲೇ ಹೇಳಿದ್ದೇನೆ. ಅವರನ್ನು ರಾಜಕೀಯ ಸಮಾಧಿ ಮಾಡುತ್ತಾರೆ ಎಂದು ಹೇಳಿದ್ದೆ. ನಾನು ಏನಾದರೂ ಹೇಳಿದರೆ ನೋಡುಕೊಳ್ಳುತ್ತಾರೆ. ನಾರಾಯಣಗೌಡ, ಎಂಟಿಬಿ, ಗೋಪಾಲಯ್ಯ, ರೋಷನ್ ಬೇಗ್, ಮುನಿರತ್ನ ಪರಿಸ್ಥಿತಿ ನೋಡುತ್ತಿದ್ದೇವೆ. ಇದು ಅವರ ಆಂತರಿಕ ಸಮಸ್ಯೆ ಅವರು ಬಹಳ ಪ್ರೀತಿಯಿಂದ ಹೋಗಿದ್ದಾರೆ. ಅವರಿಗೆ ಈಗಲಾದರೂ ಅರ್ಥವಾಗುತ್ತಿದೆಯಲ್ಲ ಅಷ್ಟು ಸಾಕು.

ಇನ್ನು ಪಕ್ಷದ ಸಂಘಟನೆ ಹಾಗೂ ಜವಾಬ್ದಾರಿ ಹಂಚಿಕೆಗಾಗಿ ಪಕ್ಷದ ರಾಷ್ಟ್ರ ನಾಯಕರು ಈ ತೀರ್ಮಾನ ಮಾಡಿದ್ದಾರೆ.

*ಜನ ವಿರೋಧಿ ಸರ್ಕಾರದ ವಿರುದ್ಧ ಧ್ವನಿ:*

ರಾಜಭವನ ಚಲೋ ಪ್ರತಿಭಟನೆ ಕಾರ್ಯಕ್ರಮ ಡಿ.ಕೆ. ಶಿವಕುಮಾರ್ ದಲ್ಲ. ಇದು ಜನರು, ರೈತರ ಧ್ವನಿ. ಹೀಗಾಗಿ ಸಾಮಾನ್ಯ ಜನರ ಬದುಕು ಕೆಣಕುತ್ತಿರುವ ಸರ್ಕಾರದ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ. ಹೀಗಾಗಿ ಪ್ರತಿಭಟನೆಗೆ ಸಾವಿರಾರು ಜನ ಸೇರಿದ್ದರಲ್ಲಿ ಯಾವುದೇ ಆಶ್ಚರ್ಯ ಇಲ್ಲ. ಇದು ಪಕ್ಷದ ಸಂಘಟನೆ ಕೂಡ. ನಾನು ಈಗಾಗಲೇ ಹೇಳಿರುವ ಪ್ರಕಾರ ಇದು ಸಂಘಟನೆ ವರ್ಷ, ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ.

Leave a Reply